Tuesday, November 24, 2009

ಮಿತ ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ಮಧುಮೇಹ ನಿಯಂತ್ರಣ ಸಾಧ್ಯ. ಟಿಫ್ ಮಧುಮೇಹ ಜಾಗೃತಿ ಅಭಿಯಾನದಲ್ಲಿ ಡಾ: ಶೋಭಿ ಥಾಮಸ್.


ತಬೂಕ್ (ಸೌದಿ ಅರೇಬಿಯಾ), ನವೆಂಬರ್ 21: ಮಧುಮೇಹ ರೋಗವನ್ನು ಸಂಪೂರ್ಣ ವಾಗಿ ಗುಣಪಡಿಸಬಹುದಾದಂತಹ ಚಿಕಿತ್ಸಾ ಪದ್ಧತಿಯನ್ನು ಇದುವರೆಗೆ ವೈದ್ಯಕೀಯ ಲೋಕದಲ್ಲಿ ಕಂಡು ಹಿಡಿಯಲು ಸಾಧ್ಯವಾಗದಿದ್ದು ಮಿತ ಮತ್ತು ನಿಯಮಿತ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಈ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ ಎಂದು ಸೌದಿ ಭಾರತೀಯ ದೂತಾವಾಸದ ನಿಯಂತ್ರಣದಲ್ಲಿರುವ ಸಮುದಾಯ ಕ್ಷೇಮಾಭಿವೃದ್ಧಿ ಸಂಘಟನೆಯ ಅಧ್ಯಕ್ಷರೂ, ತಬೂಕ್ ಮೆಡಿಕಲ್ ಯುನಿವರ್ಸಿಟಿಯ ಪ್ರಾಧ್ಯಾಪಕರೂ ಆದ ಡಾ: ಶೋಭಿ ಥಾಮಸ್ ಹೇಳಿದರು.
ತಬೂಕ್ ನಗರದಲ್ಲಿ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ಹಮ್ಮಿಕೊಂಡಿದ್ದ 15 ದಿನಗಳ ಮಧುಮೇಹ ಜಾಗೃತಿ ಅಭಿಯಾನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು ಮಧುಮೇಹ ರೋಗವಿರುವವರು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕಾಗಿರುವುದು ಅತ್ಯವಶ್ಯಕವಾಗಿದೆ. ಪ್ರಾಯ ಹೆಚ್ಚಾಗುತ್ತಿದ್ದಂತೆ ಮಧುಮೇಹದ ರೋಗಲಕ್ಷಣಗಳೂ ಹೆಚ್ಚಾಗುವುದು ಸ್ವಾಭಾವಿಕವಾಗಿದೆ.
ಆರೋಗ್ಯವಂತನಾದ ವ್ಯಕ್ತಿಯ ದೇಹದಲ್ಲಿ ಸಕ್ಕರೆಯ ಪ್ರಮಾಣ ಬೆಳಗ್ಗೆ ಆಹಾರ ಸೇವಿಸುವುದಕ್ಕಿಂತ ಮುಂಚೆ 100mg/dL ಕ್ಕಿಂತಲೂ ಹೆಚ್ಚು ಮತ್ತು ಆಹಾರ ಸೇವಿಸಿದ ಎರಡು ಘಂಟೆಯ ನಂತರ 140mg/dL ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಇದ್ದರೆ ಆ ವ್ಯಕ್ತಿ ಮಧುಮೇಹದ ಕುರಿತು ಜಾಗ್ರತೆ ಪಾಲಿಸಬೇಕಾಗಿರುವುದು ಅವಶ್ಯಕವಾಗಿದೆ.
ಮಧುಮೇಹ ಜಾಗೃತಿ ಕುರಿತು ತಬೂಕ್ ಇಂಡಿಯಾ ಫ್ರೆಟರ್ನಿಟಿ ಫೋರಂ ಹಮ್ಮಿಕೊಂಡ ಕಾರ್ಯವನ್ನು ಶ್ಲಾಘಿಸಿದರು. ಜೊತೆಗೆ ನೆರೆದಿದ್ದ ಜನತೆಗೆ ಮಧುಮೇಹದ ಕುರಿತು ಸಮರ್ಪಕ ಮಾಹಿತಿಗಳನ್ನು ನೀಡಿದರು.
ಅಭಿಯಾನದ ಅಂಗವಾಗಿ ಅರಬಿ ಭಾಷೆಯ ಜೊತೆಗೆ ಇಂಗ್ಲೀಷ್, ಹಿಂದಿ, ಕನ್ನಡ, ಮಲಯಾಳಂ ಭಾಷೆಯಲ್ಲಿ ಮುದ್ರಿಸಲಾಗಿದ್ದ ಮಧುಮೇಹ ಕುರಿತ ಜಾಗೃತಿ ಅಭಿಯಾನದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ಅಧ್ಯಕ್ಷರಾದ ಅಬ್ದುಲ್ ಲತೀಫ್ ಉಪ್ಪಿನಂಗಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸಮುದಾಯ ಕ್ಷೇಮಾಭಿವೃದ್ಧಿ ಸಂಘಟನೆಯ ಸದಸ್ಯ ಇಸ್ಮಾಯಿಲ್ ಇನೋಳಿ, ಫ್ರಟೆರ್ನಿಟಿ ಫೋರಂನ ಮಜೀದ್ ಕನ್ನಂಗಾರ್ ಭಾಗವಹಿಸಿದ್ದರು. ಅಶ್ರಫ್ ಅಜ್ಗರಿ ಸ್ವಾಗತಿಸಿದರೆ ರಜಾಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

No comments:

Post a Comment